ಚಷ್ಟನ-
ಕ್ರಿ.ಶ. ಸು. 125-135 ಕಾರ್ದಮಕ ವಂಶದ ಸಾಮಂತ ಅರಸು. ಕುಷಾಣ ವಂಶದ ಚಕ್ರವರ್ತಿಗಳ ಪ್ರಾಂತ್ಯಾಧಿಪತಿಯಾಗಿ ಪಶ್ಚಿಮ ಭಾರತ ಪ್ರದೇಶದಲ್ಲಿ ಆಳಿದ. ಕಾರ್ದಮಕ ಎಂಬ ಹೆಸರು ಪ್ರದೇಶವಾಚಕವಾಗಿರಬಹುದು. ಈತನ ತಂದೆ ಝಾಮೋತಿಕ ಸಾಮಾನ್ಯ ವ್ಯಕ್ತಿಯಾಗಿದ್ದ. ಚಷ್ಟನ ಮೊದಲು ಮಂಡಲಾಧಿಕಾರಿಯ ದ್ಯೋತಕವಾಗಿ ಕ್ಷತ್ರಪ ಎಂಬ ಪದವಿಯನ್ನೂ ರಾಜ ಎಂಬ ಬಿರುದನ್ನೂ ಧರಿಸಿದ್ದ. ಮುಂದೆ ಮೇಲಿನ ಪದವಿ ಪಡೆದು ಮಹಾಕ್ಷತ್ರಪ ಎಂದು ಕರೆಯಿಸಿಕೊಂಡ. ಈತನ ಕಾಲದಲ್ಲಿ ಸಾತವಾಹನ ವಂಶದ ಗೌತಮೀಪುತ್ರ ಸಾತಕರ್ಣಿ ಊರ್ಜಿತನಾಗಿ, ಶಕ ಮತ್ತು ಇತರ ಪರಕೀಯ ಪ್ರಾದೇಶಿಕ ರಾಜರ ಮೇಲೆ ಸಮರ ಹೂಡಿ, ಕ್ಷಹರಾತ ಕುಲದ ನಹಪಾತ ಎಂಬ ನಾಯಕನನ್ನು ಪರಾಜಯಗೊಳಿಸಿ ವಧಿಸಿದ. ಬಳಿಕ ಚಷ್ಟನನಿಗೆ ನಹಪಾನನ ಅಧಿಕಾರಕ್ಕೆ ಒಳಪಟ್ಟಿದ್ದ ಪ್ರದೇಶದ ಮೇಲಧಿಕಾರವನ್ನೂ ವಹಿಸಿಕೊಡಲಾಯಿತು. ಚಷ್ಟನ ಇದನ್ನು ವಹಿಸಿಕೊಂಡ ಮೇಲೆ ಗೌತಮೀಪುತ್ರ ಸಾತಕರ್ಣಿಯನ್ನು ವಿರೋಧಿಸಿ, ಆತ ಶಕರಿಂದ ಗೆದ್ದುಕೊಂಡಿದ್ದ ಆಕರ, ಆವಂತಿ, ಅನೂಪ, ಅಪರಾಂತ, ಸೌರಾಷ್ಟ್ರ, ಅನರ್ತ ಮೊದಲಾದ ಪ್ರದೇಶಗಳನ್ನು ಮರಳಿ ಪಡೆದ. ಈತನ ರಾಜಧಾನಿ ಉಜ್ಜಯಿನಿ ಆಗಿತ್ತು. ರಾಜ್ಯಾಡಳಿತ ನಿರ್ವಹಿಸುವಲ್ಲಿ ಈತ ತನ್ನ ಪ್ರಬುದ್ಧ ಮೊಮ್ಮಗನಾದ ಕ್ಷತ್ರಪ ರುದ್ರದಾಮನ ಸಹಕಾರ ಪಡೆದ. ಚಷ್ಟನ ತನ್ನವೇ ಆದ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತಂದ. ಅವುಗಳ ಒಂದು ಬದಿಯಲ್ಲಿ ನಕ್ಷತ್ರಗಳಿಂದ ಕೂಡಿದ ಕೋರೆಚಂದ್ರದ ಚಿತ್ರವಿದೆ.
(ಐ.ಬಿ.ಡಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ